ರಾಜ್ಯದಲ್ಲಿ ಕಾಂಗ್ರೆಸ್ ಕರಾವಳಿಯಲ್ಲಿ ಬಿಜೆಪಿ ಎನ್ನುವ ಸ್ಥಿತಿ ಇತ್ತು, ಆದರೆ ಈಗ.....!

 


ಈ ಬಾರಿಯ ಕರ್ನಾಟಕ ವಿಧಾನ ಸಭಾ ಚುನಾವಣೆ ಬಿಜೆಪಿ ಪಾಲಿಗೆ ಸುಲಭವಿಲ್ಲ. ಒಂದು ಕಡೆ ಆಡಳಿತ ವಿರೋಧಿ ಅಲೆ ಮತ್ತೊಂದು ಕಡೆ ತಲೆ ಬುಡ ಇಲ್ಲದ ನೀತಿಗಳು ಬಿಜೆಪಿಗೆ ಉರುಳಾಗಿ ಪರಿಣಮಿಸುತ್ತಿದೆ. ಚುನಾವಣೆ ಘೋಷಣೆ ಮುನ್ನ ಕಾಂಗ್ರೆಸ್ ರಾಜ್ಯದಲ್ಲಿ ಬಲಿಷ್ಠ ಹಿಡಿತ ಇಟ್ಟುಕೊಂಡು ಜನರನ್ನು ತಲುಪುತ್ತಿದ್ದರೂ ಕರಾವಳಿಯಲ್ಲಿ ಮಾತ್ರ ಈ ಬಾರಿಯೂ ಕೂಡ ಬಿಜೆಪಿ ಮೇಳೈಸಲಿದೆ ಎಂಬ ಮಾತಿತ್ತು. ಆದರೆ ಈಗ ಆ ಮಾತು ಸುಳ್ಳಾಗುವಂತೆ ಕಾಣುತ್ತಿದೆ. 

ಇದಕ್ಕೆ ಪ್ರಮುಖ ಕಾರಣ ಕರಾವಳಿಯಲ್ಲಿ 2018 ರಲ್ಲಿ ಫಲಿಸಿದ್ದ ಹಿಂದುತ್ವ, ಮೋದಿ ಅಲೆ ಸ್ವಲ್ಪ ತಣ್ಣಗಾಗಿದೆ. ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಆಡಳಿತ ವಿರೋಧಿ ಅಲೆ ಉಡುಪಿ,ದಕ್ಷಿಣ ಕನ್ನಡ, ಉತ್ತರ ಕನ್ನಡದ ಹಳ್ಳಿ,ಗಲ್ಲಿಯಲ್ಲಿ ಸದ್ದು ಮಾಡುತ್ತಿದೆ. ಹಿಂದುತ್ವ ಮುಂದಿಟ್ಟು ರಾಜಕೀಯ ಮಾಡಲು ಹೊರಟಿರುವ ಬಿಜೆಪಿಗೆ ಅದರಿಂದಲೂ ಸರಿಯಾದ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ. ಪ್ರಖರ ಹಿಂದುತ್ವ ಮತ್ತು ಮೃದು ಹಿಂದುತ್ವ ಎಂದು ಸಂಘಪರಿವಾರದ ನಾಯಕರು ಬಿಜೆಪಿ ನಾಯಕರ ವಿರುದ್ಧ ಸಿಡಿದೆದ್ದು ಪಕ್ಷೇತರವಾಗಿ ಸ್ಪರ್ಧಿಸುತ್ತಿರುವುದು ಬಿಜೆಪಿಗೆ ಕರಾವಳಿಯಲ್ಲಿ ದೊಡ್ಡ ತಲೆ ನೋವಾಗಿಸಿದೆ. ಸುಲಭವಾಗಿ ತನ್ನ ತೆಕ್ಕೆಗೆ ಬೀಳುವ ಪ್ರದೇಶಗಳಲ್ಲೇ ಬಿಜೆಪಿಗೆ ತಲೆ ನೋವು ಶುರುವಾಗಿದೆ. ಕಳೆದ ಬಾರಿ ಉಭಯ ಜಿಲ್ಲೆಯಲ್ಲಿ ಕೇವಲ ಒಂದು ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಬಲಿಷ್ಠವಾಗಿ ಕಾಣುತ್ತಿದೆ. ಸಿಕ್ಕಾ ಅವಕಾಶಗಳನ್ನು ಬಳಸಿಕೊಂಡು ಮುನ್ನುಗ್ಗಲು ಸರ್ವ ಸಿದ್ದತೆ ನಡೆಸುತ್ತಿದೆ.  ಕಾಂಗ್ರೆಸ್ ಕಳೆದ ಬಾರಿಯಂತೆ ಒಂದು ಕ್ಷೇತ್ರವಲ್ಲ ಹಲವು ಕ್ಷೇತ್ರಗಳಲ್ಲಿ ಪ್ರಾಬಲ್ಯ ಸಾಧಿಸಲಿದೆ ಎಂಬುವುದು ಮೇಲ್ನೋಟದ ಲೆಕ್ಕಚಾರ.

ತಲೆ ನೋವಾದ ಅಂತರಿಕ ಬಿಕ್ಕಟ್ಟು:

ಹೈಕಮಾಂಡ್ ಇತರ ರಾಜ್ಯದಂತೆ ಇಲ್ಲಿ ಹಿರಿ ತಲೆಗಳನ್ನು ಬದಿಗೆ ಸರಿಸಿ ಹೊಸ ಗೇಮ್ ಪ್ಲ್ಯಾನ್ ಮಾಡಲು ಹೊರಟಿತ್ತು. ಒಂದೇ ಒಂದು ಚುನಾವಣೆ ಸ್ಪರ್ಧಿಸದ ಬಿ.ಎಲ್ ಸಂತೋಷ್'ರನ್ನು ಈ ಆಟಕ್ಕೆ ಸೂತ್ರಧಾರನ್ನಾಗಿಸಿತ್ತು. ಇದೀಗ ಅದರ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಹೊಡೆತದ ಮೇಲೆ ಹೊಡೆತ ಅನುಭವಿಸುದರೊಂದಿಗೆ ಕರಾವಳಿಯಲ್ಲೂ ಮಣ್ಣು ಮುಕ್ಕುವ ಸ್ಥಿತಿಯಲ್ಲಿದೆ. ಹಲಾಡಿ ಶ್ರೀನಿವಾಸ್ ಶೆಟ್ಟಿ, ಅಂಗಾರ,ಸುಕುಮಾರ್ ಶೆಟ್ಟಿ,ಲಾಲಜಿ ಮೆಂಡನ್, ರಘುಪತಿ ಭಟ್'ರಿಗೆ ಟಿಕೆಟ್ ನೀಡದೆ ವಂಚಿಸಿ ಅಂತರಿಕವಾಗಿ ಮುನಿಸುಕೊಳ್ಳುವಂತೆ ಮಾಡಿದೆ.ಹಾಲಡಿ ಶ್ರೀನಿವಾಸ್ ಶೆಟ್ಟಿ ಅವರು ಮೇಲ್ನೋಟಕ್ಕೆ ನಿವೃತ್ತಿ ಘೋಷಿಸಿದ್ರೂ ಈ ಘೋಷಣೆ ಅವರ ಸ್ವ ಇಚ್ಚೆಯ ನಿರ್ಧಾರವಾಗಿರಲಿಲ್ಲ ಎಂಬುವುದು ರಾಜಕೀಯ ಪಡಸಾಲೆಯ ಮಾತು. ಇನ್ನು ಎಲ್ಲವೂ ಶಮನಗೊಂಡಿದೆ ಅಂದು ಕೊಂಡರೂ ಎಲ್ಲವೂ ಶಮನಗೊಂಡಿಲ್ಲ ಎಂಬುವುದೂ ಸತ್ಯವಾಗಿದೆ. 

ಇದರ ನಡುವೆ ಉಡುಪಿ ಕ್ಷೇತ್ರದಲ್ಲಿ ಧನಾತ್ಮಕ ಮತ್ತು ಎಲ್ಲ ಸಮುದಾಯದಲ್ಲಿ ಸ್ವೀಕೃತಿಯಿದ್ದ ಪ್ರಮೋದ್ ಮಧ್ವರಾಜ್ ಮತ್ತು ರಘುಪತಿ ಭಟ್ ಅವರನ್ನು ಬಿಟ್ಟು ವಿವಾದಿತ ನಾಯಕ, ಆಧಾರ ರಹಿತವಾಗಿ ಮಾತನಾಡುವ ಯಶ್ಫಾಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಅವರ ಸೊಸೈಟಿಯಲ್ಲಿ ನಡೆದ ಆತ್ಮಹತ್ಯೆ ಪ್ರಕರಣದಲ್ಲೂ ಅವರು ಆರೋಪಿ, ಹಸನಬ್ಬ, ಹಾಜಬ್ಬ ಬೆತ್ತಲೆ ಪ್ರಕರಣದಿಂದ ಮುನ್ನಲೆಗೆ ಬಂದ ಅವರು ವಿವಾದದಿಂದಲೇ ಹೆಸರುವಾಸಿ. ಅದರಲ್ಲೂ ಹಿಜಾಬ್ ವಿವಾದದ ಸಂದರ್ಭದಲ್ಲಿ ಅವರು ನೀಡಿದ ಹೇಳಿಕೆಗಳು ಸ್ವತಃ ಬಿಜೆಪಿ, ಸಂಘಪರಿವಾರದ ಜನರಲ್ಲೇ ಗೊಂದಲ ಏರ್ಪಡಿಸುದರೊಂದಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಈಡಾಗುವಂತೆ ಆಗಿತ್ತು. 

ಇನ್ನು ಕುಂದಾಪುರದಲ್ಲಿ ಎ.ಜೆ ಕೊಡ್ಗಿ ಅವರ ಮಗ ಕಿರಣ್ ಕೊಡ್ಗಿಗೆ ಟಿಕೆಟ್ ನೀಡಲಾಗಿದೆ. ಬಂಟ ಸಮುದಾಯದ ಪ್ರಾಬಲ್ಯವಿರುವ ಕುಂದಾಪುರದಲ್ಲಿ ಬ್ರಾಹ್ಮಣ ಸಮುದಾಯದ ಕಿರಣ್ ಗೆಲುವು ತೀರಾ ಕಷ್ಟಕರ ಎನ್ನಲಾಗುತ್ತಿದೆ. ಕುಂದಾಪುರದಲ್ಲಿ ಸಂಘಪರಿವಾರ ಪ್ರಾಬಲ್ಯ ಪ್ರಬಲವಾಗಿದ್ದರೂ ಬಂಟ ಸಮುದಾಯ ದಿನೇಶ್ ಹೆಗ್ಡೆ ಅವರಿಗೆ ಮತ ನೀಡಿದರೂ ಅಚ್ಚರಿಯಿಲ್ಲ. ಸುಲಭವಾಗಿ ಗೆಲ್ಲಬಹುದಾದ ಕುಂದಾಪುರದಲ್ಲಿ ಬಿಜೆಪಿ ಸದ್ಯಕ್ಕೆ ತನ್ನನ್ನು ತಾನೇ ಹಿಮ್ಮೆಟ್ಟಿಸಿದೆ. 

ಅತ್ತ ಸುನೀಲ್ ಕುಮಾರ್ ಅನಾಯಾಸವಾಗಿ ‌ಗೆಲುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅವರ ಗೆಲುವಿಗೆ ಬ್ರೇಕ್ ಹಾಕಲು ಪ್ರಮೋದ್‌ಮುತಾಲಿಕ್ ಪ್ರಖರ ಹಿಂದುತ್ವದ ಬ್ರೇಕರ್ ಹಿಡಿದು ಬಂದಿದ್ದಾರೆ. ಅವರಿದ್ದರೂ ಕಾಂಗ್ರೆಸ್ ನಲ್ಲಿ ಪ್ರಬಲ ಅಭ್ಯರ್ಥಿ ಇಲ್ಲ ಎಂದು ಆರಾಮದಲ್ಲಿದ್ದ ಸುನೀಲರಿಗೆ ಕಾಂಗ್ರೆಸ್ ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರನ್ನು ಕಣಕ್ಕಿಳಿಸಿ ಶಾಕ್ ನೀಡಿದೆ. 

ದಕ್ಷಿಣ ಕನ್ನಡದಲ್ಲೂ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ ಅಂಗಾರ ಪ್ರಚಾರಕ್ಕೂ ಬರುದಿಲ್ಲ‌ ಅಂದ್ರೆ ಸಂಘಪರಿವಾರದ ಪ್ರಭಾವಿ ನಾಯಕ ಅರುಣ್ ಪುತ್ತಿಲ್ಲ ಪಕ್ಷೇತರವಾಗಿ ಬಿಜೆಪಿ ವಿರುದ್ಧ ಕಣಕ್ಕಿಳಿದಿದ್ದಾರೆ. 

ಇನ್ನೂ ಬೈಂದೂರಿನ ಕಥೆ ನೋಡುವುದಾದರೆ ಸಾಮಾನ್ಯ ಮನುಷ್ಯ ಎಂದು ಗುರುರಾಜ್ ಗಂಟಿಹೊಳೆಯನ್ನು ಅಟ್ಟಕೇರಿಸಿ ಕಣಕ್ಕಿಳಿಸಲಾಗಿದೆ. ಸುಕುಮಾರ್ ಶೆಟ್ಟು ಸಿಟ್ಟು ನಿಜವಾಗಿಯೂ ಅಸಮಾಧಾನ ಬಿಟ್ಟು ಕೆಲಸ ಮಾಡುತ್ತಾರೆಯೇ ಎಂಬುವುದು ಫಲಿತಾಂಶದ ದಿನ ಗೊತ್ತಾಗಲಿದೆ. ಅಲ್ಲಿಯೂ ಕೂಡ ಬಿಜೆಪಿಗೆ ಪ್ರಬಲ ಅಭ್ಯರ್ಥಿ ಗೋಪಾಲ ಪೂಜಾರಿಯವರನ್ನು ಎದುರಿಸಬೇಕಿದೆ. 


ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ‌ರಚಿಸಿದ್ರು‌ ಕರಾವಳಿಯಲ್ಲಿ ಬಿಜೆಪಿ ಪ್ರಾಬಲ್ಯ ಮುಂದುವರಿಯಲಿದೆ ಎಂಬ ವಿಶ್ವಾಸ ಪಕ್ಷಕ್ಕೂ ಇಲ್ಲ. ಆ ಕಾರಣಕ್ಕಾಗಿ ಮತ್ತೆ ಮೋದಿ,ಯೋಗಿ,ಅಮಿತ್ ಶಾರನ್ನು ತಂದು‌ ಮತ ಬೇಟೆ ಮಾಡಲು ಹೊರಟಂತಿದೆ. ಆದರೆ ಗ್ಯಾಸ್ ಬೆಲೆ,ಪೆಟ್ರೋಲದ ದರ ಏರಿಕೆ, ದಿನ ನಿತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಲಾಗಿರುವ ಜನ ಬಿಜೆಪಿಗೆ ತಿರುಗಿ ಬಿದ್ದರೂ‌ ಅಚ್ಚರಿಯಿಲ್ಲ..., ಇನ್ನು ಕರಾವಳಿಯ ಟೋಲ್ ಹೋರಾಟ ಸಂಸದ ನಳಿನ್ ಕುಮಾರ್ ಅವರ ಅಪಕ್ವ ಹೇಳಿಕೆಗಳು ಎಲ್ಲವೂ ಕೂಡ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಮಾರಕವಾಗಿ ಪರಿಣಮಿಸಿದೆ. 


Comments