ಉಡುಪಿ ವಿಧಾನ ಸಭಾ ಕ್ಷೇತ್ರ: ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆ - ಪರಿಹಾರ ನೀಡುವ ಪಕ್ಷ ಯಾವುದು?
ಸಾಂದರ್ಭಿಕ ಚಿತ್ರ
ಊರು | ದೂರು | ಚುನಾವಣೆ
ಗ್ರಾಮ ಪಂಚಾಯತ್: ಪಡುತೋನ್ಸೆ ಗ್ರಾಮ ಪಂಚಾಯತ್
ಕರ್ನಾಟಕ ವಿಧಾನ ಸಭಾ ಚುನಾವಣೆಯ ಈ ಸಂದರ್ಭದಲ್ಲಿ ಪಕ್ಷ,ಅಭ್ಯರ್ಥಿಗಳ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ ಚರ್ಚೆಯಾಗಬೇಕಾದ ವಿಚಾರಗಳು ಮುನ್ನಲೆಗೆ ಬರುತ್ತಿಲ್ಲ. ಚುನಾವಣೆಗಳು ಪ್ರಜಾಪ್ರಭುತ್ವದ ಆತ್ಮ. ಜನ ಸಮಸ್ಯೆಗಳನ್ನು ನೀಗಿಸಲು ಇರುವ ದಾರಿ. ಸೂಕ್ತ ಅಭ್ಯರ್ಥಿಯ ಆಯ್ಕೆ ಅಭಿವೃದ್ಧಿ ಕೆಲಸದ ಮಾನದಂಡದೊಂದಿಗೆ ತಾರತಮ್ಯ ರಹಿತ ಪಾರದರ್ಶಕ ಆಡಳಿತ ನೀಡುವ ಜನ ಸೇವಕರಿಗೆ ಮತ ನೀಡುವ ಪ್ರವೃತ್ತಿ ಬೆಳೆಯಬೇಕಾಗಿದೆ. ಈ ಸಂದರ್ಭದಲ್ಲಿ ಪ್ರತಿ ಊರಿನ ಸಮಸ್ಯೆ ಮುನ್ನಲೆಗೆ ತಂದು ನಿಂತ ಅಭ್ಯರ್ಥಿಗಳ ಆದ್ಯತೆಯಾಗಿ ಬದಲಾಯಿಸುವ ಪ್ರಯತ್ನ ನಮ್ಮದು. ಉಡುಪಿ ಟುಡೆ ಎತ್ತುವ ಈ ಸಮಸ್ಯೆಗಳ ಮೇಲೆ ಜನರು ಕಣ್ಣು ಹಾಯಿಸಿ ನಿಮ್ಮ ಬಳಿ ಬರುವ ಅಭ್ಯರ್ಥಿಗಳ ಬಳಿ ಪ್ರಸ್ತಾಪಿಸಿ. ಸಮಸ್ಯೆ ನಿಭಾಯಿಸುವವರಿಗೆ ಮತ ನೀಡುವುದಾಗಿ ಹೇಳಿ. ಸಬೂಬು, ಅದು-ಇದು ಬೇಡ. ಪರ್ಯಾಯ ಮಾರ್ಗ ಹುಡುಕಲಿ ಸಮಸ್ಯೆ ನಿವಾರಿಸಲಿ.
ಸಮಸ್ಯೆ ನಂಬರ್ - 1
ಕೆಮ್ಮಣ್ಣು ಗ್ರಾಮ ಪಂಚಾಯತ್ (ಪಡುತೋನ್ಸೆ ಗ್ರಾಮ ಪಂಚಾಯತ್): ಉಡುಪಿ ವಿಧಾನ ಸಭಾ ಕ್ಷೇತ್ರದ ಅಡಿಯಲ್ಲಿ ಬರುವ ಕೆಮ್ಮಣ್ಣು ಗ್ರಾಮಪಂಚಾಯತ್'ನ ಅತೀ ದೊಡ್ಡ ಸಮಸ್ಯೆ ಕಸ ವಿಲೇವಾರಿ. ಜನ ಬೆಸೆತ್ತಿದ್ದಾರೆ. ಪಂಚಾಯತ್ ಆಡಳಿತವಾಗಲಿ, ಜಿಲ್ಲಾಡಳಿತವಾಗಲಿ ಅಥವಾ ಯಾವುದೇ ಇಲಾಖೆಯಾಗಲಿ ಇದುವರೆಗೆ ಕಸ ವಿಲೇವಾರಿ ಸಮಸ್ಯೆಗೆ ದೊಡ್ಡ ಮಟ್ಟದ ಪರಿಹಾರ ಕಂಡುಕೊಳ್ಳಲು ಸೋತಿದ್ದಾರೆ. ಇದಕ್ಕೆ ನಾನಾ ಕಾರಣ ಮುಂದಿಡುವ ಪ್ರಯತ್ನ ಮಾಡಲಾಗುತ್ತದೆ ಆದರೆ ಪರಿಹಾರ ಮಾತ್ರ ಶೂನ್ಯ.
ಒಣ ಕಸ ಸಂಗ್ರಹಿಸುವ ಪ್ರಯತ್ನ ಪಂಚಾಯತ್ ನಲ್ಲಿ ಮುಂದುವರಿದಿದೆ ಪ್ಲಾಸ್ಟಿಕ್ ಸಾಮಾಗ್ರಿಗಳ ಸಂಗ್ರಹಣೆ ಇದೆ. ಆದರೆ ಹಸಿ ಕಸ ಸಂಗ್ರಹಣೆ ಮತ್ತು ನಿರ್ವಹಣೆಗೆ ಯಾವುದೇ ಕ್ರಮ ಇಲ್ಲದ ಕಾರಣ ಹಳ್ಳ,ತೋಡು,ರಸ್ತೆ ಎಲ್ಲೆಂದರಲ್ಲಿ ಕಸ ತುಂಬಿದ ಗಂಟುಗಳು ಕಾಣ ಸಿಗುತ್ತದೆ. ಇನ್ನು ಕೆಲವರಂತೂ ದಾರಿ ಕಾಣದೆ ಸುಡುತ್ತಿದ್ದಾರೆ.
ಪಂಚಾಯತ್ ಕಸ ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಮಾಡೋಣ ಅಂದ್ರೆ ನಮ್ಮ ಬಳಿ ಸರಕಾರಿ ಜಮೀನು ಇಲ್ಲ. ಜಾಗ ಖರೀದಿಸಿ ನಿರ್ವಹಣೆಗೆ ಚಿಂತಿಸೋಣ ಎಂದರೆ ಸುತ್ತಮುತ್ತಲಿನ ಜನ ವಿರೋಧಿಸುತ್ತಾರೆ ಎಂಬ ಮಾತು ಕೇಳಿ ಬರುತ್ತಿದೆ. ಹಾಗಾಂತ ಈ ಗಂಭೀರ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ. ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಬೇಕು. ಕಸ ವಿಲೇವಾರಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಕೊಳ್ಳಲು ಸಹಾಯ ಮಾಡಬೇಕು. ಅಭ್ಯರ್ಥಿಗಳು ಈ ಬಾರಿ ಮತ ಬೇಟೆಗೆ ಬಂದಂತಹ ಸಂದರ್ಭದಲ್ಲಿ ಜನರು ಅವರ ಮುಂದೆ ಈ ಸಮಸ್ಯೆಯನ್ನು ನಿವಾರಿಸಲು ಒತ್ತಾಯಿಸಬೇಕು. ಅದಕ್ಕಾಗಿ ಜನಾಂದೋಲನ ಪ್ರಾರಂಭಿಸಿದರೂ ತಪ್ಪಲ್ಲ.
ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಹೂಡೆ,ಪಡುಕುದ್ರು,ತಿಮ್ಮಣ್ಣಕುದ್ರು,ಗುಜ್ಜರ್ ಬೆಟ್ಟು ಸೇರಿದಂತೆ ಹಲವು ಪ್ರದೇಶದ ಜನ ಕಸ ವಿಲೇವಾರಿಯ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಗ್ರಾಮಗಳು ಬೆಳೆಯುತ್ತಿದೆ. ಜನ ಸಂದಣಿಯು ಹೆಚ್ಚುತ್ತಿದೆ. ಮನೆ ನಿರ್ಮಾಣ ಹೆಚ್ಚಾಗುತ್ತಿದೆ. ಸಹಜವಾಗಿ ಕಸ ಉತ್ಪತ್ತಿ ಕೂಡ ಹೆಚ್ಚಾಗಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯ ಸಂದರ್ಭದಲ್ಲಿ ಮಾರಕ ಕಸಗಳು ಪ್ರಕೃತಿ ಮಡಿಲಿಗೆ ಸೇರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಉಡುಪಿ ಕ್ಷೇತ್ರದ ಅಭ್ಯರ್ಥಿಗಳು ಈ ಬಾರಿ ಮತ ಕೇಳಲು ಬಂದಾಗ ಅವರಲ್ಲಿ ಈ ಕುರಿತು ಪ್ರಸ್ತಾಪಿಸಿ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ಇದಕ್ಕಾಗಿ ನಾವು ಮಾಡಬೇಕಾಗಿರುವುದು ಇಷ್ಟೆ ಪಕ್ಷ ಬೇಧ ಮರೆತು ಒಂದಾಗುವುದು. ಕಸ ವಿಲೇವಾರಿ ಸಮಸ್ಯೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅಭ್ಯರ್ಥಿಗಳ ಮುಂದೆ ಮಂಡಿಸುವುದು. ಸಾಧ್ಯವಾದರೆ ಅವರ ಬಳಿ ಪರಿಹಾರದ ಆಶ್ವಾಸನೆಯ "ಗ್ಯಾರಂಟಿ ಕಾರ್ಡ್" ಪಡೆದುಕೊಳ್ಳುವುದು. ಗೆದ್ದ ನಂತರ ಆಶ್ವಾಸನೆ ಪೂರೈಸಲು ಸತತವಾಗಿ ಒತ್ತಡ ಹಾಕುವುದು. ಗ್ರಾಮಸ್ಥರು ಒಗ್ಗಟಾದರೆ ಎಲ್ಲವೂ ಸಾಧ್ಯ ಎನಂತೀರಾ?
ನಿಮ್ಮ ಸಲಹೆಗಳಿದ್ದಲ್ಲಿ ಕಮೆಂಟ್ ಮಾಡಿ.
ನಿಮ್ಮ ಊರಿನ ಸಮಸ್ಯೆಯನ್ನು ಚರ್ಚಿಸಲು ನಮಗೆ ಇಮೇಲ್ ಮಾಡಿ: udupitoday123@gmail.com
.jpeg)


Comments