ಉಡುಪಿ ಕ್ಷೇತ್ರದಲ್ಲಿ ಟಿಕೆಟ್ ಘೋಷಣೆಯಾಗಿದೆ ಅದ್ರೆ ಎರಡೂ ಪಕ್ಷದಲ್ಲೂ "ನೀರವ ಮೌನ"

 


ಅಭ್ಯರ್ಥಿ ಆಯ್ಕೆಯ ವಿಚಾರದಲ್ಲಿ ಉಡುಪಿ ಕ್ಷೇತ್ರದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗೊಂದಲವುಂಟಾಗಿದ್ದು ಈ ಬಾರಿಯೇ ಹೇಳಬಹುದು. ಕಾಂಗ್ರೆಸ್ ಪಕ್ಷದ ಮುಂದಾಳುವಾಗಿದ್ಧ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರಿದ ಮೇಲೆ ತೆರವಾಗಿದ್ದ ಅಭ್ಯರ್ಥಿ ಸ್ಥಾನಕ್ಕೆ ತಾ ಮುಂದು ನಾ ಮುಂದು ಎಂದು ಹೇಳಿ ಹಲವಾರು ‌ಮಂದಿ ಟವೆಲ್ ಹಾಕಿದ್ದರು. ಆದರೆ ಹೈಕಮಾಂಡ್ ಮಣೆ ಹಾಕಿದ್ದು ಮಾತ್ರ ಉದ್ಯಮಿ ಪ್ರಸಾದ್ ಕಾಂಚನ್'ಗೆ, ಪ್ರಮೋದ್ ನಿರ್ಗಮನದ ಮುನ್ನ ಪಕ್ಷ ಚಟುವಟಿಕೆಯಲ್ಲಿ ಸಕ್ರಿಯರಾಗಿಲ್ಲದ ಪ್ರಸಾದ್ ಪ್ರಮೋದ್ ಮಧ್ವರಾಜ್ ಪಕ್ಷ ಬಿಟ್ಟ ತಕ್ಷಣ ಪತ್ರಿಕಾಗೋಷ್ಠಿ ನಡೆಸಿ ಎಂಟ್ರಿ ಕೊಟ್ಟಿದ್ದರು. ಆ ಪತ್ರಿಕಾಗೋಷ್ಠಿ ನಡೆಸುವಂತೆ ಅವರಿಗೆ ಹೇಳಿದ್ದು ಡಿ.ಕೆ ಶಿ ಎಂಬುವುದು ಗುಟ್ಟಾಗಿ ಉಳಿದಿಲ್ಲ. ಅಂದಿನಿಂದಲೇ ಅವರ ಟಿಕೆಟ್ ಭದ್ರವಾಗುತ್ತ ಬಂದಿತ್ತು. ಇನ್ನು ಅವರ ಆಯ್ಕೆಯಿಂದ ಮನನೊಂದಿರುವ ಇತರ ಆಕಾಂಕ್ಷಿಗಳು ಪಕ್ಷದಲ್ಲಿ ಪ್ರಮಾಣಿಕವಾಗಿ ದುಡಿದವರಿಗೆ ಏನು ಇಲ್ಲವೆಂದು ಹೇಳುತ್ತಾ ದೊಡ್ಡ ಮಟ್ಟದ ಅಪಸ್ವರ ಎತ್ತಿ ತಿರುಗುತ್ತಿದ್ದಾರೆ. ಪಕ್ಷದ ಒಗ್ಗಟ್ಟಿನಲ್ಲಿ ಟಿಕೆಟ್ ತಂದಿಟ್ಟ ಕಗ್ಗಂಟಿನಿಂದ ಪ್ರಸಾದ್ ಕಾಂಚನ್ ಅಂತರಿಕ ಬಿಸಿ ಶಮನಗೊಳಿಸುವುದು ದೊಡ್ಡ ತಲೆನೋವಾಗಿದೆ.

ಇನ್ನು ಪಕ್ಷದ ಹೈಕಮಾಂಡ್ ಈ ಕಗ್ಗಂಟನ್ನು ಬೇಧಿಸಿ ಯಾವ ರೀತಿ ಪಕ್ಷವನ್ನು ಕ್ಷೇತ್ರದಲ್ಲಿ ಒಗ್ಗೂಡಿಸಲಿದೆ ಎಂಬುವುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. 

ಇನ್ನೂ ಬಿಜೆಪಿಯ ಅವಸ್ಥೆ ಇದಕ್ಕಿಂತ ಭಿನ್ನ ಏನೂ ಇಲ್ಲ. ಯಶ್ಫಾಲ್ ಸುವರ್ಣ ಆಯ್ಕೆಯಿಂದ ಹಾಲಿ ಶಾಸಕ ರಘುಪತಿ ಭಟ್ ಮನಸ್ಸು ಒಡೆದು ಹೋಗಿದೆ. ಬುಧವಾರ ಬೆಳಿಗ್ಗೆ ಬಂದು ಕಣ್ಣೀರಿಟ್ಟದ್ದು ಇದಕ್ಕೆ ಸಾಕ್ಷಿ. ಅತ್ತ ಪ್ರಮೋದ್ ಮಧ್ವರಾಜ್ ನಾನು ಬಿಜೆಪಿ ನಾಯಕತ್ವ ಹೇಳಿದ ಹಾಗೆ ಕೇಳುತ್ತೇನೆ ಎನ್ನುತ್ತಲೇ ಟಿಕೆಟ್ ಮೇಲೆ ಕಣ್ಣು ಇಟ್ಟವರು. ಆದರೆ ಅವರಿಗೆ ಟಿಕೆಟ್ ಪ್ರಾಪ್ತಿಯಾಗಿಲ್ಲ. ಕಾಂಗ್ರೆಸ್ ನಲ್ಲಿ ಇದ್ದರೆ ಈ ಬಾರಿ ಅವರಿಗೆ ಟಿಕೆಟ್ ಸಿಗುತ್ತಿತ್ತು ಮತ್ತು ಅವರೂ ಗೆಲ್ಲುವ ಸಾಧ್ಯತೆ ಕೂಡ ಹೆಚ್ಚಿತ್ತು ಎಂಬುವುದು ಕಟ್ಟೆ ಮಾತು. 


ಅಂತೂ ಉಡುಪಿ ಕ್ಷೇತ್ರ ಗೊಂದಲದ ಗೂಡಾಗಿದೆ. ಪ್ರಭಾವಿಗಳಿಗೆ ಟಿಕೆಟ್ ತಪ್ಪಿದ ಕಾರಣ ಪ್ರಚಾರದಲ್ಲೂ ಉದಾಸೀನ ತೋರುವ ಸಾಧ್ಯತೆ ಹೆಚ್ಚಿದೆ. ಅಂತರಿಕ ಒಡುಕು, ವೈ ಮನಸ್ಸು ಸುಧಾರಿಸುವಲ್ಲಿ ಅಭ್ಯರ್ಥಿಗಳು ವಿಫಲವಾದರೆ ಎರಡೂ ಪಕ್ಷದ ಅಭ್ಯರ್ಥಿಗಳಿಗೆ ಗೆಲುವು ಕಬ್ಬಿಣದ ಕಡಲೆಯಾಗಿ ಪರಿಣಮಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿ ಇಬ್ಬರೂ ಮೊಗವೀರ ಸಮುದಾಯದ ಅಭ್ಯರ್ಥಿಗಳಾಗಿರುವುದರಿಂದ ಕುತೂಹಲ ಮತ್ತಷ್ಟು ಹೆಚ್ಚಿಸಿದೆ. ಬಿಲ್ಲವ,ಬಂಟ ಮತಗಳನ್ನು ಈ ಅಭ್ಯರ್ಥಿಗಳು ಯಾವ ರೀತಿಯಲ್ಲಿ ಹಿಡಿದಿಟ್ಟುಕೊಳ್ಳುತ್ತಾರೆ ಎಂಬುದು ಮುಖ್ಯ. ವೋಟ್ ಸಮಾನವಾಗಿ ಹಂಚಿಕೆಯಾದರೆ ಅಲ್ಪಸಂಖ್ಯಾತರ ಮತ ಈ ಕ್ಷೇತ್ರದಲ್ಲಿ ನಿರ್ಣಯಕವೆನಿಸುತ್ತದೆ. 

ಇನ್ನು ಇಬ್ಬರು ಕೂಡ ಯುವಕರು, ಧನಿಕರು. ಹಿಂದುತ್ವದ ಮುಖವಾಗಿರುವ ಯಶ್ಫಾಲ್ ಅವರಿಗೆ ಗೆಲುವಿನ ಹೆಚ್ಚು ಅವಕಾಶ ಇದ್ದರೂ ಈ ಬಾರಿ ಸರಕಾರದ ಹಲವಾರು ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿ ಮತವಾಗಿ ಪರಿಗಣಿಸಲು ಸಾಧ್ಯವಾದರೆ ಪ್ರಸಾದ್ ಕೂಡ ಗೆದ್ದರೂ ಆಶ್ಚರ್ಯವಿಲ್ಲ. ಆದರೆ ಯಾವುದಕ್ಕೂ ಒಗ್ಗಟ್ಟು ಅಗತ್ಯ. ಎರಡೂ ಪಕ್ಷಗಳಲ್ಲಿ ನಡೆಯುವ ಮುಂದಿನ ಬೆಳವಣಿಗೆಯಿಂದ ಇದು ಇನ್ನಷ್ಟು ಸ್ಪಷ್ಟವಾಗಲಿದೆ.

Comments