ಉಡುಪಿ ಶಾಸಕ ಯಶ್ಫಾಲ್ ಸುವರ್ಣ ಅವರ ಮುಂದಿರುವ ಸವಾಲುಗಳು!

 


ವರದಿ: ಉಡುಪಿ ಟುಡೆ


ಉಡುಪಿ: ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಕಾಂಚನ್ ವಿರುದ್ಧ ಮೂವತ್ತು ಸಾವಿರ ಮತಗಳಿಂದ ಗೆದ್ದಿರುವ ಯಶ್ಫಾಲ್ ಸುವರ್ಣ ಇದೀಗ ಹನಿಮೂನ್ ಪಿರೇಡ್ ನಲ್ಲಿ ಇದ್ದಾರೆ. ಶಾಸಕನಾದ ಖುಷಿ ಖುಷಿಯೊಂದಿಗೆ ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೇಳೈಸುತ್ತಿರುವ ಪ್ರಮುಖ ಸಮಸ್ಯೆಗಳು ಅವರಿಗೆ ಸವಾಲೊಡ್ಡಿದೆ. ಕ್ಷೇತ್ರದ ಜನರ ಈ ಬೇಡಿಕೆಗಳನ್ನು ಈಡೇರಿಸಬೇಕಾಗಿರುವುದು ಜನ ಪ್ರತಿನಿಧಿಯಾಗಿ ಅವರ ಕರ್ತವ್ಯ ಕೂಡ. ಅವರಿಗೆ ನೆನಪಿಸುವ ಸಲುವಾಗಿ ಈ ಸವಾಲುಗಳನ್ನು ಅವರ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ.


ಸವಾಲುಗಳು:


1. ಕುಡಿಯುವ ನೀರಿನ ಸಮಸ್ಯೆ:


ಉಡುಪಿ ಕ್ಷೇತ್ರದ ನಗರ ಪ್ರದೇಶ ಸೇರಿದಂತೆ ಹಲವು ಪಂಚಾಯತ್ ವ್ಯಾಪ್ತಿಯಲ್ಲಿ ಬೇಸಿಗೆಯಲ್ಲಿ ತೀವ್ರತರವಾದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಜನ ಕಂಗಲಾಗಿದ್ದಾರೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವಲ್ಲಿ ಕಳೆದ ಬಾರಿಯ ಶಾಸಕರಾದ ರಘುಪತಿ ಭಟ್ ಕೂಡ ವಿಫಲವಾಗಿದ್ದು ಈ ಬಾರಿಯಾದರೂ ಅದರ ಕುರಿತು ನಿಗಾ ವಹಿಸಿ ಪರಿಹರಿಸುವ ಕೆಲಸವಾಗಬೇಕಿದೆ.


2. ವರಾಹಿ ನೀರಿನ ಯೋಜನೆ: 

ನಗರ ಪ್ರದೇಶ ಸೇರಿದಂತೆ ಉಡುಪಿ ‌ಕ್ಷೇತ್ರದ ಹಲವು ಪಂಚಾಯತ್ ಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ವರಾಹಿ ಯೋಜನೆ ಕುಂಟುತ ಸಾಗುತ್ತಿದ್ದು ಅದನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಿ ಜನರಿಗೆ ಕುಡಿಯುವ ನೀರು ಪೂರೈಸುವ ಕುರಿತು ಚಿಂತಿಸುವುದು.


3. ಸರಕಾರಿ ಮೆಡಿಕಲ್ ಕಾಲೇಜು: 

ಜಿಲ್ಲೆಯ ಮತ್ತು ಕ್ಷೇತ್ರದ ಜನರ ಬಹುದಿನದ ಬೇಡಿಕೆಯಾದ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯ ಕುರಿತು ಪರಿಣಾಮಕಾರಿಯಾಗಿ ಸದನದಲ್ಲಿ ವಾದ ಮಂಡಿಸಿ ಅದನ್ನು ತರುವಲ್ಲಿ ಯಶಸ್ಸು ಕಾಣಬೇಕಾಗಿದೆ. 


4. ಮಾಜಿ ಶಾಸಕರಾದ ರಘುಪತಿ ಭಟ್ ಅವರ ಸಮಯದಲ್ಲಿ ಕ್ಷೇತ್ರದ ಹಲವು ಮುಖ್ಯ ರಸ್ತೆಗಳನ್ನು ಸರಿ ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ. ಆದರೆ ಗ್ರಾಮಗಳ ರಸ್ತೆಗಳು ಇನ್ನು ಕೂಡ ದುರಸ್ತಿಯಾಗದೆ ಹಲವು ಕಡೆ ಜನ ಸಮಸ್ಯೆ ಎದುರಿಸುತ್ತಿದ್ದು ಯಾವುದೇ ತಾರತಮ್ಯವಿಲ್ಲದೆ ಗುಣಮಟ್ಟದ ರಸ್ತೆ ಕಾಮಗಾರಿ ನಡೆಸಬೇಕಾಗಿದೆ. 


5. ನಿಮ್ಮ ಕ್ಷೇತ್ರ ವ್ಯಾಪ್ತಿಯ ಹೆದ್ದಾರಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು ಸಂಸದೆಯೊಂದಿಗೆ ಸೇರಿಕೊಂಡು ಹೆದ್ದಾರಿ ವಿಸ್ತರಣಾ ಕಾರ್ಯ ಶೀಘ್ರ ಪೂರ್ಣಗೊಳಿಸಬೇಕಾಗಿದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದ ಸಂದರ್ಭದಲ್ಲೂ ಇಂದ್ರಾಳಿಯಲ್ಲಿ ಸೇತುವೆ ನಿರ್ಮಿಸುವಲ್ಲಿ ವಿಫಲವಾಗಿದ್ದು ನಿಮ್ಮ ಕಾಲದಲ್ಲಿ ಕೆಲವೇ ಕೆಲವು ಸಮಯದಲ್ಲಿ ಪೂರ್ಣಗೊಳಿಸುವ ಪಣತೊಡಬೇಕಾಗಿದೆ.


6. ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ:

ಹಾಜಿ ಅಬ್ದುಲ್ಲಾ‌ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯೂ ಬಿಜೆಪಿ ಸರಕಾರದ ಅವಧಿಯಲ್ಲಿ ಅನುದಾನ ಇಲ್ಲದೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಮುಷ್ಕರ ಹೂಡಿದ್ದು ನೆನಪಿರಬಹುದು ಇದೀಗ ರಾಜ್ಯ ಸರಕಾರದ ಬಳಿ ಪರಿಣಾಮಕಾರಿಯಾಗಿ ರೂಪುರೇಷೆ ಮಂಡಿಸಿ ಅನುದಾನ ಪಡೆದು ಆಸ್ಪತ್ರೆಯು ಒಳ್ಳೆಯ ರೀತಿಯಲ್ಲಿ ನಡೆಯುವ ಹಾಗೆ ನೋಡಿಕೊಳ್ಳಬೇಕಾಗಿದೆ.


8. ವಸತಿ ಕಲ್ಯಾಣ ಯೋಜನೆಯಡಿಯಲ್ಲಿ ಜನರಿಗೆ ಸೂರು ಒದಗಿಸುವ ಕುರಿತು ಪರಿಣಾಮಕಾರಿಯಾಗಿ ಕೆಲಸ ಮಾಡುವುದು.


9. ಕ್ಷೇತ್ರದ ಹಲವು ಕಡೆಯಲ್ಲಿ ಬೃಹತ್ ಮರಗಳನ್ನು ಕಡೆದು ಕಾಮಗಾರಿ ನಡೆಸಲಾಗಿದ್ದು ಸುಸ್ಥಿರ ಅಭಿವೃದ್ಧಿ ಕಡೆ ಗಮನ ಹರಿಸಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನವನ್ನು ನಿಯಂತ್ರಿಸುವುದು.


10. ನಗರ ಪ್ರದೇಶಗಳಲ್ಲಿ ವ್ಯಾಪಕವಾದ ಪಾರ್ಕಿಂಗ್ ಸಮಸ್ಯೆಯಿದ್ದು ಕಾನೂನಾತ್ಮಕವಾಗಿ ಎಲ್ಲ ನಿಬಂಧನೆಗಳನ್ನು ಪಾಲಿಸಿ ಕಟ್ಟಡ ಮಾಲಿಕರಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲು ಕಟ್ಟು ನಿಟ್ಟಾಗಿ ಸೂಚನೆ ನೀಡುವುದು. ಸಾಧ್ಯವಾದರೆ ಪಾರ್ಕಿಂಗ್ ಅತಿಕ್ರಮಣಗೈದ ಕಟ್ಟಡದ ಮೇಲೆ ಕಾನೂನಾತ್ಮಕವಾಗಿ ಬುಲ್ಡೋಝರ್ ಬಳಸಿ ಪಾರ್ಕಿಂಗ್ ವ್ಯವಸ್ಥೆ ಮಾಡಿಸುವುದು. 


11. ಕ್ಷೇತ್ರದ ಪ್ರಮುಖ ಪ್ರವಾಸಿ ತಾಣ ಗುರುತಿಸಿ ಅಭಿವೃದ್ಧಿ ಪಡಿಸುವುದು‌. 


12. ಇತ್ತೀಚಿಗೆ ನದಿ ಅತಿಕ್ರಮಣ ಮಾಡಿ ಜಾಗ ಒತ್ತುವರಿ ಮಾಡಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದ್ದು ಇದರಿಂದಾಗಿ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಅಂತಹ ಒತ್ತುವರಿಗೊಂಡ ಜಾಗವನ್ನು ತಾರತಮ್ಯ ಮಾಡದೆ ಕಾನೂನಾತ್ಮಕವಾಗಿ ತೆರವುಗೊಳಿಸುವುದು.


13. ಬಹುತೇಕ ಎಲ್ಲ ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದ್ದು ಅದರ ಕುರಿತು ಪರಿಹಾರ ಒದಗಿಸುವಲ್ಲಿ ಪ್ರಯತ್ನ ನಡೆಸುವುದು. 


14. ಮಳೆಗಾಲ ಸಮೀಪಿಸುತ್ತಿದ್ದು ಕ್ಷೇತ್ರದ ತಗ್ಗು ಪ್ರದೇಶಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪರಾಮರ್ಶೆ ನಡೆಸುವುದು. 


15. ನೈತಿಕ ಪೊಲೀಸ್'ಗಿರಿ,ಡ್ರಗ್ಸ್ ಹಾವಳಿ, ರೌಡಿಸಂ, ಕ್ಷೇತ್ರ ವ್ಯಾಪ್ತಿಯ ಮಟ್ಕಾ ದಂಧೆಯನ್ನು ನಿಯಂತ್ರಿಸಲು ಪೊಲೀಸರಿಗೆ ಸೂಕ್ತ ಸಹಕಾರ ನೀಡುವುದು.


ಈ ಮೇಲಿನ ಪ್ರಮುಖ ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳು ಕ್ಷೇತ್ರದ ಜನರ ಮುಂದಿದ್ದೂ ಆದಷ್ಟು ಶೀಘ್ರವಾಗಿ ನೆರವೇರಿಸುವ ಮಹತ್ತರವಾದ ಜವಾಬ್ದಾರಿ ನೂತನ ಶಾಸಕರ ಮೇಲಿದೆ. ಯಾವ ರೀತಿಯಲ್ಲಿ ಇವರು ಈ ಸವಾಲುಗಳನ್ನು ಪರಿಹರಿಸುತ್ತಾರೆ ಎಂಬುವುದನ್ನು ಕಾದು ನೋಡಬೇಕಾಗಿದೆ.

Comments